ಭಾರತದ ಗ್ರಂಥಾಲಯ ಪಿತಾಮಹ ಎನಿಸಿಕೊಂಡ ಪದ್ಮಶ್ರೀ ಪುರಸ್ಕೃತ ಡಾ| ಎಸ್ ಆರ್ ರಂಗನಾಥನ್ ಇವರ 134 ನೇ ಜನ್ಮದಿನಾಚರಣೆಯ ಪ್ರಯುಕ್ತ, ಕಾಲೇಜಿನ ಐಕ್ಯುಎಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ವಿಶಿಷ್ಠರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಗ್ರಂಥಾಲಯದ ನೂತನ ವೆಬ್ ಸೈಟ್ ಹಾಗೂ ಇ-ನ್ಯೂಸ್ ಲೆಟರ್ ನ ಅನಾವರಣ ಮತ್ತು ವಿಶೇಷ ಉಪನ್ಯಾಸ ಕಾಯಕ್ರಮವನ್ನು ಪಿ.ಜಿ. ಎ.ವಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಪುತ್ತೂರು, ಇಲ್ಲಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ರಾಮ ಕೆ. ಇವರು ಗ್ರಂಥಾಲಯದ ಇ-ಸುದ್ದಿ ಪತ್ರವನ್ನು ಬಿಡುಗಡೆಗೊಳಿಸಿ, ʼಓದಿನಿಂದ ವ್ಯಕ್ತಿತ್ವ ವಿಕಸನʼ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ “ಪುಸ್ತಕ ನಮ್ಮ ನಿಜವಾದ ಮಿತ್ರ, ಪುಸ್ತಕಗಳನ್ನು ಓದುವುದರಿಂದ ನಮ್ಮ ವ್ಯಕ್ತಿತ್ವವನ್ನು ಬೆಳೆಸಬಹುದು, ಪ್ರತಿ ದಿನವೂ ಯಾವುದಾದರೂ ಪುಸ್ತಕವನ್ನು ಓದಿ ನಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸೋಜನ್ ಕೆ ಜಿ. ರವರು ಕಾಲೇಜಿನ ಗ್ರಂಥಾಲಯದ ನೂತನ ವೆಬ್ ಸೈಟ್ ಲೋಕಾರ್ಪಣೆ ಮಾಡಿ, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸಿಗುವ ಎಲ್ಲಾ ಮಾಹಿತಿ ಹಾಗೂ ಸೌಲಭ್ಯಗಳನ್ನು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಗರಿಷ್ಠಮಟ್ಟದಲ್ಲಿ ಉಪಯೋಗಿಸಲು ಕರೆನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಹಾಗೂ ಬಹುಮುಖ ಪ್ರತಿಭೆಯ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಇವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ, ಇತ್ತೀಚಿಗೆ ರಾಜ್ಯದ ಘನತೆವೆತ್ತ ರಾಜ್ಯಪಾಲರಿಂದ ಅಧ್ಯಾಪಕ ಭೂಷಣ ಪ್ರಶಸ್ತಿ ಸ್ವೀಕರಿಸಿದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿಯಾದ ಶ್ರೀಮತಿ ಯಶೋದ, ಕಾಲೇಜಿನ ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ರಾಜೇಂದ್ರ ಕೆ, ಪಿ.ಹೆಚ್.ಡಿ ಪದವಿಗಳಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರಿನ ಸಾಧಕ ಗ್ರಂಥಪಾಲಕರಾದ ಡಾ| ಹರೀಶ್ ಸಿ.ಕೆ., ಗ್ರಂಥಪಾಲಕರಾಗಿ ವಿಶಿಷ್ಠ ಸಾಧನೆಗೈದ, ಸ.ಪ್ರ.ದ.ಕಾಲೇಜು ಕೋಟೇಶ್ವರದ ಹಿರಿಯ ಗ್ರಂಥಪಾಲಕರಾದ ರವಿಚಂದ್ರ ಹೆಚ್.ಎಸ್., ಸ.ಪ್ರ.ದ. ಕಾಲೇಜು ತೆಂಕನಿಡಿಯೂರಿನ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಹಾಗೂ ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜಿನ ಗ್ರಂಥಪಾಲಕರಾದ ರಾಮ ಕೆ. ಇವರನ್ನು ಗೌರವಪೂರ್ವಕ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಸಂಯೋಜಕ, ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ವೆಂಕಟೇಶ್ ರವರು ಗ್ರಂಥಾಲಯ ಮತ್ತು ಮಾಹಿತಿ ಕ್ಷೇತ್ರಕ್ಕೆ ಡಾ| ಎಸ್. ಆರ್. ರಂಗನಾಥನ್ ರವರ ಶ್ರಮ ಹಾಗೂ ಅಪಾರವಾದ ಕೊಡುಗೆ ಯನ್ನು ಸ್ಮರಿಸಿ, ಪ್ರಾಸ್ಥಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರೂ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರೂ ಆದ ಪ್ರೊ. ಶ್ರೀಮತಿ ಅಡಿಗ ಧನ್ಯವಾದ ಸಮರ್ಪಿಸಿದರು.
ಆಂಗ್ಲಭಾಷಾ ಸಹ ಪ್ರಾಧ್ಯಾಪಕರಾದ ಯೋಗೇಶ್ ಡಿಹೆಚ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ| ರಾಮಚಂದ್ರ ಪಾಟ್ಕರ್, ಗಣಿತಶಾಸ್ತ್ರ ಸಹ ಪ್ರಾಧ್ಯಾಪಕರಾದ ಶ್ರೀಮತಿ ಸುರೇಖ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಉದಯರಾಜ್, ವಿದ್ಯಾರ್ಥಿನಿಯರು ಹಾಗೂ ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು.
ಸಹಾಯಕ ಗ್ರಂಥಪಾಲಕಿಯರಾದ ಶಮ್ಮಿ ಜಿ. ಹಾಗೂ ವಿಜಯಲಕ್ಷ್ಮೀ ಕಾರ್ಯಕ್ರಮದಲ್ಲಿ ಸಹಕರಿಸಿದರು.
ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕು. ಧನಲಕ್ಷ್ಮೀ ನಿರೂಪಿಸಿದರು.